ಅಪೊಲ್ಲೋನಿಯಸ್, ಪರ್ಗಾದ
	ಪ್ರಾಚೀನ ಗ್ರೀಕ್ ದೇಶದ ಸುಪ್ರಸಿದ್ಧ ಗಣಿತಜ್ಞ (ಸು. ಕ್ರಿ.ಪೂ. 3ನೆಯ ಶತಮಾನದ ಉತ್ತರಾರ್ಧ-2ನೆಯ ಶತಮಾನದ ಪೂರ್ವಾರ್ಧ). ಸ್ಥಳ ಏಷ್ಯ ಮೈನರಿನ ಪರ್ಗಾ; ಆದ್ದರಿಂದ ಪರ್ಗಾದ ಅಪೊಲ್ಲೋನಿಯಸ್ ಎಂದೇ ಖ್ಯಾತನಾದ. ಶಂಕುಜಗಳನ್ನು ಕುರಿತು ನಡೆಸಿದ ಸಂಶೋಧನೆಗಳಿಂದ ಪ್ರಸಿದ್ಧನಾಗಿದ್ದಾನೆ. ಈತನ ಎಂಟು ಗ್ರಂಥಗಳಲ್ಲಿ ಏಳು ನಮಗೆ ದೊರೆತಿವೆ-ಮೂಲ ಗ್ರೀಕ್ ಭಾಷೆಯಲ್ಲಿ ನಾಲ್ಕು, ಅರಬ್ಬೀ ಭಾಷಾಂತರದಲ್ಲಿ ಮೂರು. ಅಪೊಲ್ಲೋನಿಯಸನ ಬರೆಹ ಒಬ್ಬ ಆಧುನಿಕ ವಿದ್ಯಾರ್ಥಿ ಅಭ್ಯಸಿಸಲು ಕೂಡ ಬಹಳ ಕಠಿನವಾಗಿದೆ. ಬಹುಶಃ ಈ ಕಾರಣದಿಂದ ಅವನ ಶಂಕುಜದಮೇಲಿನ ಗ್ರಂಥಗಳನ್ನು ಪಠ್ಯಪುಸ್ತಕ ಬರೆಯಲು ಮಾದರಿ ಎಂದು ಯಾರೂ ಬಳಸಿಕೊಳ್ಳಲಿಲ್ಲ. ಈ ವಿಚಾರದಲ್ಲಿ ಈ ಗ್ರಂಥಗಳಿಗೂ ಯೂಕ್ಲಿಡನ ಮೂಲ ಭಾವನೆಗಳು (ಯೂಕ್ಲಿಡ್ಸ್ ಎಲಿಮೆಂಟ್ಸ್) ಎಂಬ ಗ್ರಂಥಕ್ಕೂ ಬಹಳ ವ್ಯತ್ಯಾಸವಿದೆ.
ಅಪೊಲ್ಲೋನಿಯಸ್ ನಿರ್ದೇಶಕಗಳನ್ನೂ ಅವುಗಳ ಪರಿವರ್ತನೆಯನ್ನೂ ಉಪಯೋಗಿಸಿದ್ದ. ಆದರೆ ಇಲ್ಲಿ ಇವನು ಮೊದಲಿಗನಲ್ಲ. ಶಂಕುಜಗಳನ್ನು ಕುರಿತು ಬೆಳಕಿಗೆ ಬಂದಿದ್ದ ಹಿಂದಿನ ಬರೆಹಗಳಲ್ಲಿಯೂ ನಿರ್ದೇಶಕಗಳ ಉಲ್ಲೇಖವಿದೆ. ಪ್ಲೇಟೋನ ಸಮಕಾಲೀನ ಮೆನೆಷ್ಮಸ್ ಎಂಬ ಗಣಿತಜ್ಞ ಪ್ಯರಾಬೊಲದ ಒಂದು ವಿಶಿಷ್ಟ ಗುಣವನ್ನು ಬಳಸಿಕೊಂಡಿದ್ದ. ಗ್ರೀಕರು ಬಳಸಿದ ನಿರ್ದೇಶಕ ವ್ಯವಸ್ಥೆಗಳು ಆಯಾ ಆಕೃತಿಗಳಲ್ಲಿ ವಿಶಿಷ್ಟವಾಗಿದ್ದ ರೇಖೆಗಳನ್ನು ಅವಲಂಬಿಸಿದ್ದುವು.

	ಅಪೊಲ್ಲೋನಿಯಸನ ಜೀವನ ವಿಚಾರ ಬಲು ಸ್ವಲ್ಪ ಮಾತ್ರ ತಿಳಿದಿದೆ. ಅವನು ಉತ್ತರ ಈಜಿಪ್ಟಿನ ಅಲೆಕ್ಸಾಂಡ್ರಿಯ ಎನ್ನುವ ಅಂದಿನ ಸುಪ್ರಸಿದ್ಧ ಜ್ಞಾನಕೇಂದ್ರದಲ್ಲಿ ವಿದ್ಯಾರ್ಜನೆ ಮಾಡಿದ. ಆಗ ಅಲೆಕ್ಸಾಂಡ್ರಿಯದ ಪ್ರಥಮ ಪ್ರಸಿದ್ಧ ಗಣಿತಜ್ಞ ಯೂಕ್ಲಿಡ್ ಅಲ್ಲಿ ಅಧ್ಯಾಪಕನಾಗಿದ್ದ (ನೋಡಿ- ಯೂಕ್ಲಿಡ್-2). ಅಲೆಕ್ಸಾಂಡ್ರೆಯದಿಂದ ಮರಳಿದ ಅಪೊಲ್ಲೋನಿಯಸ್ ಪೆರ್ಗಾನಮ್‍ನಲ್ಲಿ ನೆಲೆಸಿ ಶಂಕುಜಗಳ ಮೇಲಿನ ಕೃತಿಗಳನ್ನು ಬರೆದ. ಇಂದು ನಾವು ಶಂಕುಜಗಳೆಂದು ಕರೆಯುವ ಪ್ಯರಾಬೊಲ, ದೀರ್ಘವೃತ್ತ ಮತ್ತು ಹೈಪರ್ಬೊಲ ಎನ್ನುವ ಹೆಸರುಗಳನ್ನು ಅಪೊಲ್ಲೋನಿಯಸ್ ಬಳಸಿದನೆಂದು ಇಲ್ಲಿ ಸೂಚಿಸಬಹುದು. ಅಪೊಲ್ಲೋನಿಯಸನ ವೃತ್ತ, ಅಪೊಲ್ಲೋನಿಯಸನ ಪ್ರಮೇಯ, ಜ್ಯಾಮಿತಿಯ ಮೂಲ ಪಾಠಗಳಲ್ಲಿ ಸುಪ್ರಸಿದ್ಧವಾಗಿವೆ.				
(ಬಿ.ಬಿ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ